ಜೈವಿಕ ಉದ್ಯಾನವನದ ಧ್ಯೇಯೋದ್ದೇಶ

ಬೆಂಗಳೂರಿನಂತಹ ಮಹಾನಗರದ ಜನರಿಗೆ ಅದರಲ್ಲೂ ಮುಖ್ಯವಾಗಿ ಮಕ್ಕಳಿಗಾಗಿ ಒಂದು ಜೈವಿಕ ಮನರಂಜನಾ ಕೇಂದ್ರವನ್ನು ಸ್ಥಾಪಿಸುವುದು ಈ ಉದ್ಯಾನವನದ ಮುಖ್ಯ ಉದ್ದೇಶವಾಗಿದೆ. ಈ ದಿಶೆಯಲ್ಲಿ ನಗರಕ್ಕೆ ಸಮೀಪದಲ್ಲಿರುವ ಚಂಪಕಧಾಮ ಕಣಿವೆಯ ಮಧ್ಯೆ ಈ ರಾಷ್ಟ್ರೀಯ ಉದ್ಯಾನವನ ತಲೆ ಎತ್ತಿದೆ. 1972ರಲ್ಲಿ ಚಿಕ್ಕ ಪ್ರಾಣಿ ಸಂಗ್ರಹಾಲಯವಾಗಿ ಪ್ರಾರಂಭಗೊಂಡ ಇದು 2002ರ ಹೊತ್ತಿಗೆ ಬೃಹತ್ ಗಾತ್ರದಲ್ಲಿ ಬೆಳೆದಿತ್ತು. ಈ ಜೈವಿಕ ಉದ್ಯಾನವನ ಇಂದು ಸ್ಥಳೀಯ ಹಾಗೂ ಹೊರಗಿನ ಪ್ರವಾಸಿಗರ ಬಹುಬೇಡಿಕೆಯ ತಾಣವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೇವಲ ಪ್ರವಾಸೀ ತಾಣವಾಗಿ ಉಳಿಯದೇ ಜೀವ ವೈವಿಧ್ಯತೆ ಮತ್ತು ಅವುಗಳ ಸಂರಕ್ಷಣೆಯ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಗಮನಾರ್ಹ.

ಜೈವಿಕ ಉದ್ಯಾನವನದ ಗುರಿ

ನೈಸರ್ಗಿಕ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು, ಕಾಡು ಪ್ರಾಣಿಗಳಿಗೆ ನೈಸರ್ಗಿಕ ಆವಾಸಸ್ಥಾನಗಳನ್ನು ಕಲ್ಪಿಸುವುದು ಮತ್ತು ಅವುಗಳ ಕುರಿತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಜೈವಿಕ ಉದ್ಯಾನವನದ ಮುಖ್ಯ ಗುರಿಯಾಗಿದೆ.

ರಾಜ್ಯ ಹಾಗೂ ರಾಷ್ಟ್ರದ ಪ್ರಮುಖ ಮೃಗಾಲಯದಲ್ಲಿ ಒಂದೆನಿಸಿಕೊಂಡಿರುವ ಈ ಉದ್ಯಾನವನ ಅನೇಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಿರುವುದಲ್ಲದೇ ವೈಜ್ಞಾನಿಕವಾಗಿಯೂ ಅಭಿವೃದ್ಧಿ ಹೊಂದಿದೆ. ವಿವಿಧ ರೀತಿಯ ಪಕ್ಷಿ ಸಂಕುಲ, ಸರೀಸೃಪ, ಸಸ್ತನಿಗಳ ಉತ್ತಮ ನಿರ್ವಹಣೆ, ಸಫಾರಿ ಮೂಲಕ ಹುಲಿ, ಸಿಂಹ, ಕರಡಿ ಮುಂತಾದ ವನ್ಯ ಜೀವಿಗಳ ಸಮೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವುದು ಉದ್ಯಾನವನದ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂತಾನಾಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಗಳು ವೈಜ್ಞಾನಿಕ ಅಭಿವೃದ್ಧಿಯನ್ನು ಸೂಚಿಸುತ್ತದೆ. ಚಿಟ್ಟೆ ಉದ್ಯಾನ, ಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಕುರಿತು ಅಧ್ಯಯನ ಮಾಡಲು ಇಚ್ಛಿಸುವವರಿಗಾಗಿ ನೇಚರ್ ಕ್ಯಾಂಪ್, ಪ್ರವಾಸೋದ್ಯಮ ಅಭಿವೃದ್ಧಿ, ಪ್ರಾಣಿಗಳ ಆಹಾರ ಮತ್ತು ಅವುಗಳ ಆರೋಗ್ಯ ರಕ್ಷಣೆ ಮುಂತಾದ ಕಾರ್ಯಚಟುವಟಿಕೆಗಳನ್ನು ಆಡಳಿತ ವರ್ಗ ನಿರ್ವಹಿಸುತ್ತದೆ.

ಉದ್ದೇಶಗಳು

  • ಅಳಿವಿನಂಚಿನಲ್ಲಿರುವ ಜೀವ ಸಂಕುಲಗಳ ಸಂರಕ್ಷಣೆಯ ಮೂಲಕ ದೇಶದ ಜೀವ ವೈವಿಧ್ಯತೆಯ ಶ್ರೀಮಂತಿಕೆಯನ್ನು ಬಲಗೊಳಿಸುವುದು.
  • ಕಾಡಿನಲ್ಲಿ ವಿನಾಶದ ಅಂಚಿನಲ್ಲಿರುವ ಜೀವಿಗಳಿಗೆ ಪುನರ್ವಸತಿ ಒದಗಿಸುವುದು ಮತ್ತು ಅವುಗಳ ಸಂತಾನಾಭಿವೃದ್ಧಿಗೆ ಸೂಕ್ತ ಅವಕಾಶ ಕಲ್ಪಿಸುವುದು.
  • ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಜೀವ ಸಂಕುಲಗಳ ಕುರಿತು ಒಲವು ಮೂಡಿಸುವುದು ಹಾಗೂ ಅವರಿಗೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಪರಿಸರ ಸಮತೋಲನದ ಬಗೆಗೆ ಅರಿವು ಮೂಡಿಸುವುದು.
  • ವೈಜ್ಞಾನಿಕ ಅಧ್ಯಯನಗಳು, ಪ್ರಾಣಿಗಳ ಕುರಿತು ಸಂಶೋಧನೆ ಹಾಗೂ ಅವುಗಳ ಸಂರಕ್ಷಣೆಗೆ ಅವಕಾಶ ನೀಡುವುದು ಹಾಗೂ ಅವುಗಳ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವುದು.
  • ವೈಜ್ಞಾನಿಕ ಸಂಶೋಧನೆ, ಅಧ್ಯಯನ ಹಾಗೂ ದಾಖಲಾತಿ
  • ನಿಯಮಿತವಾಗಿ ಶೈಕ್ಷಣಿಕ ಶಿಬಿರ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜೀವ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವುದು.
  • ಅನಾಥ ಹಾಗೂ ಸಂರಕ್ಷಿತ ಕಾಡು ಪ್ರಾಣಿಗಳಿಗೆ ಸೂಕ್ತವಾದ ವಸತಿ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಅವುಗಳ ನಿರ್ವಹಣೆ ಮಾಡುವುದು.
  • ಜೈವಿಕ ಸಂಶೋಧನೆ, ಸಂತಾನಾಭಿವೃದ್ಧಿ ಹಾಗೂ ಇನ್ನಿತರ ಸಂಶೋಧನೆಗಳನ್ನು ನಡೆಸಲು ಪ್ರಾಣಿ ಮತ್ತು ಸಸ್ಯ ತಳಿಗಳನ್ನು ಸಂರಕ್ಷಿಸುವುದು.
  • ಪ್ರವಾಸಿಗರ ಮನರಂಜನೆಗೆ ಅವಕಾಶ ನೀಡುವುದು. ಕಾಡಿನಲ್ಲಿ ಕ್ಷೀಣಿಸುತ್ತಿರುವ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂಖ್ಯೆಯನ್ನು ಕಾಪಾಡಿಕೊಳ್ಳುವುದು ಮತ್ತು ಹೆಚ್ಚಿಸುವುದು.

ಮೃಗಾಲಯ ನಕ್ಷೆಕರ್ನಾಟಕ ನಕ್ಷೆ